About this book
ಭಾವಗಳೆಲ್ಲ ಬಚ್ಚಿಡುವಂತದ್ದೇ..! ಅಪರೂಪಕ್ಕೆ ಅಲ್ಲೊಬ್ಬಿಬ್ಬರು ಬಿಟ್ಟರೆ ಹೆಚ್ಚೆಲ್ಲಾ ಮುಚ್ಚಿಟ್ಟವರೇ. ಹೇಳಿಕೊಂಡರೆ ನಿರಾಳವಾದೀತು ಎಂಬ ಆಕಾಂಕ್ಷೆಗಿಂತಲೂ, ಕೇಳಿಸಿ ಕೊಂಡವರು ಆಡಿಕೊಳ್ಳುತ್ತಾರೆ ಎಂಬ ಆತಂಕವೇ ಹೆಚ್ಚು. ಹಾಗಾಗಿಯೇ ತುಟಿ ಕಚ್ಚಿ ನಿಂತು ಬದುಕುವವರೇ ಬಹುತೇಕ. ಆದರೂ ಎಲ್ಲಾದರೂ ಎಂತಾದರು ಬಹಿರ್ಮುಖವಾಗಬೇಕೆಂಬ ಹಂಬಲವೊಂದು ಎಲ್ಲರಲ್ಲಿಯೂ ಅಂತರ್ಗತವಾಗಿರುವುದು ನಿತ್ಯ ಸತ್ಯ. ಹೀಗೆ ಮಾತುಗಳಲ್ಲಿ ಹೇಳಲಾಗದ ತುಡಿತಗಳು ಪದ ರೂಪದಲ್ಲಿ ಹೊರಹೊಮ್ಮಿ ರುವುದೇ “ಬಚ್ಚಿಟ್ಟ ಭಾವಗಳು!" ಇಲ್ಲಿರುವುದು ಬರಿ ಕವನಗಳಲ್ಲ, ಅವು ನಮ್ಮೆಲ್ಲರ ಕಥೆಗಳು ಹೌದು. ಕವಯತ್ರಿ ಮಹಿಮ ಮಹೇಶ್ ಶೆಣೈ ಅವರು ನವಿರು ಭಾವನೆಗಳನ್ನು ಪದಬಂಡಾರದ ಸಂಕಲೆಯಲ್ಲಿ ಬಂಧಿಸದೆ ಎಲ್ಲರೂ ಓದಿ ತಮ್ಮದೆಂದು ಅಪ್ಪುವಂತೆ ಒಪ್ಪವಾಗಿ ಬರೆದಿದ್ದಾರೆ. ಪ್ರತಿಯೊಂದು ಕವನವೂ ಆ ಕ್ಷಣದ, ಆ ದಿನದ ಭಾವವಾಗಿ ಉಳಿಯದೇ ಎಲ್ಲಾ ಕಾಲಗಳಿಗೂ ಸಲ್ಲುವ ನುಡಿ ರೂಪೀ ಬಾಳ್ವೆಯಂತಿವೆ. ಮಹಿಮಾ ಅವರ ನಿತ್ಯ ಬದುಕಿನ ಸಹಜತೆ ಮತ್ತು ಸರಳತೆ ಅವರ ಕಾವ್ಯದಲ್ಲೂ ಇಣುಕ ಹಾಕುತ್ತದೆ. ತಿಳಿ ಮನಸು, ಒಳ ಹೃದಯ, ಹಳೆ ನೆನಪು, ಹೊಸ ಹುರುಪು, ತುಮುಲ, ನಿಜ ಪ್ರೀತಿ, ಯಾತನೆ, ಯಾಚನೆ ಹೀಗೆ ಈ "ಬಚ್ಚಿಟ್ಟ ಭಾವಗಳು" ಬಿಚ್ಚಿಡುವ ಭಾವನೆಗಳು ನೂರಾರು. ಪ್ರತೀ ಕವನದ ಭಾಷೆ, ಭಾವ ಮತ್ತು ಆಶಯ ಓದಿ ಮುಗಿಸಿದ ಮೇಲೂ ಕಾಡುತ್ತವೆ ಹಾಗೆ ಮತ್ತೇನನ್ನೋ ಬೇಡುತ್ತವೆ. ಒಂದೊಂದು ಕವನವು ಹಿಂದೆಂದೋ ನಮ್ಮೊಳಗೊ ಬಂದು ಹೋದ ಭಾವಗಳು.