About this book
ಹಿತಶತ್ರು' ವರ್ತಮಾನ ಮತ್ತು ಭೂತಕಾಲದ ಎರಡು ಪದರಗಳಲ್ಲಿ ಸಾಗುವ ಕಥೆ. ಕೆಲವೊಮ್ಮೆ ಮಕ್ಕಳ ಅಭ್ಯುದಯಕ್ಕೋ ಅಥವಾ ಯಾವುದೋ ಒತ್ತಡಗಳಿಗೊ ಕಟ್ಟುಬಿದ್ದು ಹೆತ್ತವರು ಮಾಡುವ ನಿರ್ಧಾರಗಳು ಮಕ್ಕಳಿಗೆ ಉಸಿರುಗಟ್ಟಿಸಬಹುದು. ಈ ಕಥೆಯಲ್ಲಿ ಮೊದಲಿನಿಂದಲೂ ತಂದೆಯ ನಿರ್ಧಾರಗಳು ಮಗನ ಬದುಕಿನಲ್ಲಿ ತಂದ ಸಂಕಷ್ಟ, ತಂದೆಯೇ ಮಗನ ಹಿತಶತ್ರು ಎನ್ನುವಂತೆ ಬಿಂಬಿಸುತ್ತದೆ. ಈ ಕಾದಂಬರಿಯ ಎಲ್ಲಾ ಪಾತ್ರಗಳು ಒಂದು ರೀತಿಯ ಆದರ್ಶಗಳಿಗೆ ಕಟ್ಟುಬಿದ್ದು ತಮ್ಮ ಸಂಸ್ಕಾರವನ್ನು ಬಿಟ್ಟು ಕೊಡಲಾಗದೆ ಹೊಸತನ್ನು ಒಪ್ಪಿಕೊಳ್ಳದೆ ನರಳುತ್ತಿರುತ್ತವೆ. ಇದು ಇಂದಿನ ಸಮಾಜದಲ್ಲಿ ಎಲ್ಲರೂ ಎದುರಿಸುತ್ತಿರುವ ಸಮಸ್ಯೆ ಕೂಡ ಹೌದು! ಹೊಸತನ್ನು ಒಪ್ಪಿಕೊಳ್ಳಬೇಕೋ? ಬೇಡವೋ? ಎನ್ನುವ ಜಿಜ್ಞಾಸೆಯಲ್ಲೇ ಕೆಲವರು ಸಮಯ ವ್ಯಯಿಸುತ್ತಾರೆ, ಆದರೆ 'ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು' ಎನ್ನುವಂತೆ ನೆಮ್ಮದಿಯ ಸುಖ ಜೀವನಕ್ಕೆ ಆಧುನಿಕತೆ ಬೇಕು, ಆದರೆ ಮಾನವೀಯ ಮೌಲ್ಯಗಳು ಉಳಿಯಬೇಕು. ತಾನು ಅಂದುಕೊಂಡದ್ದೇ ಸರಿ ಎಂದು ವಾದಿಸುವ ಹಿರಿಯರು, ನಿಮ್ಮದೆಲ್ಲಾ ಹಳೆ ಆಲೋಚನೆಗಳು, ಉಪದೇಶಗಳು ಎಂದು ನಿರ್ಲಕ್ಷ್ಯ ಮಾಡುವ ಯುವ ಜನಾಂಗ ಮುಖ್ಯವಾಗಿ ಜೀವನದ ಹಳೆಯ ಅನುಭವಗಳಿಗೆ ಹೊಸ ಚಿಂತನೆಯ ಸ್ಪರ್ಶ ಕೊಡಲು ಕಲಿಯಬೇಕು, ಆಗ ಬದುಕು ಹಸನಾಗುತ್ತದೆ. ಇದೇ ಈ ಕಥೆಯ ಮೂಲ ಸಾರ.